ಅಸಿಟನಿಲೈಡ್
ರಾಸಾಯನಿಕ ಆಂಟಿಫೆಬ್ರಿನ್ (ಜ್ವರಹರಿ) ಹೆಸರಿನಲ್ಲಿ ಅನಿಲೀನೊಂದಿಗೆ ಗ್ಲೇಸಿಯಲ್ (ಹಿಮಂದ) ಅಸಿಟಿಕ್‍ಆಮ್ಲ ವರ್ತಿಸಿದಾಗ ಬರುವ ಉತ್ಪನ್ನ. 1886ರಲ್ಲಿ ತಯಾರಾಗಿ, 75 ವರ್ಷಗಳ ಕಾಲ ಜ್ವರಹರಿ, ನೋವಾರಿಕವಾಗಿ ಹಲವಾರು ಪೇಟೆ ಮದ್ದುಗಳಲ್ಲಿ ಬಳಕೆಯಲ್ಲಿತ್ತು. ಜ್ವರವನ್ನು ಇಳಿಸುವುದೇ ಹೊರತು ಇದು ಜ್ವರದ ಕಾರಣವನ್ನು ಕಳೆಯದು. ಕರುಳಿನ ಹುಳುಗಳನ್ನು ಕಳೆಯಲು ನ್ಯಾಫ್ತಲೀನ್ ಕೊಡಲೋಸುಗ, ಗೊತ್ತಿರದೆ ಕೈತಪ್ಪಾಗಿ ಅಸಿಟನಿಲೈಡನ್ನು ಜ್ವರವಿದ್ದ ರೋಗಿಗೆ ಕೊಟ್ಟಾಗ, ಅವನ ಜ್ವರ ಇಳಿದುದು ಸೋಜಿಗವೆನಿಸಿತ್ತು. ಇದರ ಸೇವನೆಯಿಂದ ಮೈಯಲ್ಲಿ ತುಸುಪಾಲು ವಿಷಕರವಾದ ಅನಿಲೀನಾಗುವುದರಿಂದ ಇದು ಒಳ್ಳೆಯದಲ್ಲ. ಮೇಲಿಂದ ಮೇಲೆ ಸೇವಿಸುತ್ತಿದ್ದಲ್ಲಿ ಆಕ್ಸಿಜನ್ ಹೊರುವ ಬಲ ರಕ್ತದಲ್ಲಿ ಕುಂದಿ ಓಕರಿಕೆ, ವಾಂತಿ, ಕುಟ್ಟುಸಿರು, ಜವಗುಂಡಿಗೆ, ಕಡುಬೆವರಿಕೆ ಉಂಟಾಗಿ ತುಟಿ ಉಗುರು ಮೈ ನೀಲಿಗಟ್ಟಿ ಸುಸ್ತಾಗಿ ಬೀಳಿಸುವುದು. ಈ ಮದ್ದಿಗೆ ಒಗ್ಗದವರಲ್ಲಿ ತುರುಚೆದದ್ದು (ಅರ್ಟಿಕೇರಿಯ). ಜ್ವರಗಳಂಥ ತೊಂದರೆ ಆಗಬಹುದು. ಆದ್ದರಿಂದ ಆಸ್ಪಿರಿನ್ನಿಗಿಂತಲೂ ಚೆನ್ನಾಗಿ ನೋವು ಕಳೆವಂತಿದ್ದರೂ, ಇದರ ಬಳಕೆ ಈಗ ಸರಿಯಲ್ಲ. ಇದನ್ನೀಗ ನೋವು ಕಳೆವ ಫಿನಸೆಟಿನ್ನಿನ ಇನ್ನೂ ವಿಷಕರ ಮದ್ದೆಂದು ಗಣಿಸಬಹುದು. ಬಿಳಿಯ ಹರಳುಗಳು ಇಲ್ಲವೇ ಪುಡಿಯಾಗಿರುವ ಅಸಿಟಿನಿಲೈಡಿನ ರಾಸಾಯನಿಕ ಸೂತ್ರಸಂಕೇತ ಸೆಂ. ಮಟ್ಟದಲ್ಲಿ ಕರಗಿ ಸೆಂ. ಮಟ್ಟದಲ್ಲಿ ಕುದಿಯುತ್ತದೆ. ನೀರು, ಈಥರ್,ಮದ್ಯಸಾರಗಳಲ್ಲಿ ಕರಗುವುದು.									
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ